ಮಹಿಳೆ ಮತ್ತು ಪಾತ್ರ ನಿರ್ವಹಣೆ “ಇನ್ನು ಎರಡು ತಿಂಗಳಿಗೆ ನಿನ್ನ ಮದುವೆ, ರಿಹರ್ಸಲ್ ಅಂತಾ ರಾತ್ರಿವರೆಗೂ ತಿರಗಬೇಡಾ. ಅತ್ತೆ ಮನೆಯವರು ಏನು ಅನ್ಕೊಂಡಾರು? ಅಯ್ಯೋ ಇಡೀ ದಿನಾ ಮನೇಲಿ ಇದ್ರುನೂ ಸಮಯ ಸಾಕಾಗಲ್ಲಾ, ಇನ್ನು ನಾಟಕ ಅದು ಇದು ಅಂತ ಹೇಗೆ ಮಾಡ್ತಿ? ಅಲ್ಲಾ..ನಿಮ್ಮ ಗಂಡ ಏನು ಅನ್ಕೋಳಲ್ವಾ?” ಅಂತಾ ದಿನ ಈ ತರಹದ ಸವಾಲುಗಳನ್ನು ಮೊದಲು ಎದುರಿಸಲು ನನಗೆ ತುಂಬಾನೇ ಕಷ್ಟ ಆಗ್ತಿತ್ತು. ಏನೋ ತಪ್ಪು ಮಾಡ್ತಿದ್ದೀನಾ? ಎಂಬ ಪ್ರಶ್ನೆ ಕಾಡ್ತಿತ್ತು. ಆದರೆ ಇದನ್ನೆಲ್ಲಾ ಎದುರಿಸಿ ನಾಟಕದತ್ತ ಮನ ಒಲಿತಿದೆ ಅಂದರೆ, ಅದರಲ್ಲಿ ಏನೋ ವಿಶೇಷತೆ ಇರಬಹುದಲ್ಲ? ನಾಟಕದಲ್ಲಿ ಬರುವ ಪಾತ್ರಗಳು ನಮ್ಮಲ್ಲಿ ಇರುವ ಪಾತ್ರಗಳೇ. “ಮಹಿಳೆ ಮತ್ತು ನಟನೆ” ಇವೆರಡು ಶಬ್ದಗಳಿಗೆ ತುಂಬಾ ನಂಟಿದೆ. ಮಗು ಹುಟ್ಟಿದ ತಕ್ಷಣವೇ ಯುವತಿಯ ಪಟ್ಟ ಬಿಟ್ಟು,ತಾಯಿಯಾಗಿ ತನ್ನ ಮಗುವನ್ನು ತನ್ನದೇ ಭಾಷೆಯಲ್ಲಿ ಮಾತನಾಡಿಸಲು ಆರಂಭಿಸುತ್ತಾಳೆ. ಯಾವುದೇ ತರಹದ ತರಬೇತಿ ಇಲ್ಲದ ತಾಯಿ-ಸ್ಥಾನದ ಪಾತ್ರ ನಿರ್ವಹಣೆ ಸಹಜವಾಗಿ ಬಂದದ್ದು. ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ವಿವಿಧ ಹಂತಗಳಲ್ಲಿ ಪಾತ್ರ ಬದಲಾಗುತ್ತಾ ಹೋಗುತ್ತದೆ. ಬಣ್ಣ ಹಚ್ಚಿದ ಮೊದಲ ಸಲ ಕಣ್ಣು ತೆರೆದು ನನ್ನನ್ನು ನಾನು ಕನ್ನಡಿಯಲ್ಲಿ ನೋಡಿದಾಗ ಗುರುತೇ ಸಿಗಲಿಲ್ಲ. ಕೊಂಬೆಗೆ ಸುತ್ತಿದ ಮಂಗನ ಬಾಲದ ಹಾಗೆ ನಿಲ್ಲಿಸಿದ ಜಡೆ, ಸರ್ಕಸ್‍ನಲ್ಲಿ ಜೋಕರ್‍ಗೆ ಬಳಿದ ಹಾಗೆ ಕೆನ್ನೆಯ ಮೇಲೆ ಗುಲಾಬಿ ಬಣ್ಣ, ದೊಡ್ಡ ಕುಂಕುಮ ಮತ್ತು ದೊಡ್ಡ ದೊಡ್ಡ ಹಳದಿ ಹೂವು ಇರುವ ಹಸಿರು ಬಣ್ಣದ ಸೀರೆ.. ಅಬ್ಬಾ! ನಿಜವಾಗಿ ನಾನಿರುವ ವ್ಯಕ್ತಿತ್ವಕ್ಕೆ ವಿರುದ್ಧವಾಗಿರುವ ಪಾತ್ರ ಅದು. ಅಂದು ಡಾ ಚಂದ್ರಶೇಖರ್ ಕಂಬಾರರ “ಸಿರಿ ಸಂಪಿಗೆ”ಯ ಕಮಲಿಯಾಗಿದ್ದೆ. ವೇದಿಕೆಗೆ ಬರುವ ಮೊದಲು ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು. ಹೇಗೆ ನಟಿಸ್ತೀನಿ? ಹೇಗೆ ಕಾಣಿಸ್ತೀನಿ? ‘ಜೋರು ಹೆಣ್ಣುಮಗಳು’ ಅಂತಾ ಜನ ಅನುಮಾನಿಸ್ತಾರಾ? ಇತ್ಯಾದಿ. ಆದರೆ, ನಾಟಕ ಶುರು ಆಗಿ ಕೆಲವು ನಿಮಿಷ ಎದೆಬಡಿತ ಜೋರಾಗಿತ್ತು. ಆ ತಾಯಿ ರಂಗಭೂಮಿಗೆ ಒಮ್ಮೆ ನಮಸ್ಕರಿಸಿ, ಎಲ್ಲಾ ನಿನ್ನದೇ ಅಮ್ಮಾ! ಅಂತ ಮನದಾಳದಿಂದ ಪ್ರಾರ್ಥಿಸಿ ವೇದಿಕೆಗೆ ಹೋದೆ. ನಾಟಕ ಮುಗಿದು ಎಲ್ಲರೂ ಬಂದು ಬೆನ್ನು ತಟ್ಟಿ, ಭಲೇ! ಶಭಾಷ್! ಅನ್ನೋವರೆಗೂ ಕಮಲಿ ನನ್ನಬಿಟ್ಟಿರಲಿಲ್ಲ. ಹಿರಿಯ ಮೇಕಪ್ ಕಲಾಕಾರ ದಿ. ಗಜಾನನ ಮಹಾಲೆಯವರು ನಾನಿದ್ದಲ್ಲಿಗೆ ಬಂದು “ನಿನ್ನ ನಟನೆ, ಮುಖದ ಭಾವ ಮತ್ತು ಆ ನಗು ನನಗೆ ಹಿಂದಿನ ಕಲಾವಿದೆಯರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಕಂದಾ, ತುಂಬಾ ಮುಂದೆ ಹೋಗ್ತಿಯಾ, ಬಿಡಬೇಡಾ ಈ ನಟನೆಯನ್ನಾ” ಅಂತಾ ಕಣ್ಣಲ್ಲಿ ನೀರು ತುಂಬಿ ಹೇಳಿದರು. ಅದನ್ನು ನೆನೆಪಿಸಿಕೊಂಡಾಗ ಅನಿಸಿದ್ದು ಅಂದರೆ “ನನ್ನ ತಾಯಿ ‘ರೇವತಿ’ ಅಂತ ನನಗೆ ಒಮ್ಮೆ ಜನ್ಮ ಕೊಟ್ಟಿದ್ರೆ, ರಂಗಭೂಮಿ ತಾಯಿ ನನಗೆ ಪದೇ ಪದೇ ಜನ್ಮ ಕೊಡ್ತಾಳೆ – ‘ಸಿರಿಸಂಪಿಗೆ’ಯ ಕಮಲಿಯಾಗಿ, ಮೃಚ್ಛಕಟಿಕದ ರದನಿಕೆಯಾಗಿ, ಜಡಭರತನ ಕನಸುಗಳ ಪ್ರಯಾಣಿಕಳಾಗಿ, ಮತ್ತೊಂದರಲ್ಲಿ ಕೆಲಸದವಳಾಗಿ, ಮಗದೊಂದರಲ್ಲಿ ಕುರುಡಿಯಾಗಿ, ವಿಧವೆಯಾಗಿ..” ಹೀಗೆ ಹತ್ತು ಹಲವು ಜನ್ಮಗಳನ್ನು ಜೀವಿಸಿರುವ ಸಿಹಿ ಅನುಭವ. ನಟನೆಯಲ್ಲಿ ನಾನು ನಾನಾಗಿರದೆ, ಇನ್ನೊಂದು ಪಾತ್ರವಾಗಿ ಆ ಪಾತ್ರದ ಕಷ್ಟ-ಸುಖಗಳನ್ನು ಅರಿತುಕೊಂಡು ನಟಿಸುವ ಸಮಯದಲ್ಲಿ ನಮ್ಮೊಳಗೆ ಸಹಜವಾಗಿ ಗಟ್ಟಿತನ ಬರುತ್ತದೆ. ಅಷ್ಟೇ ಅಲ್ಲದೆ ನಿಜಜೀವನದಲ್ಲಿ ಬೇರೊಬ್ಬರ ಕಷ್ಟ-ಸುಖಗಳನ್ನು ಅರಿತುಕೊಳ್ಳುವ ಸಾಮಥ್ರ್ಯ ಮೂಡುತ್ತದೆ. ಇದೆಲ್ಲವನ್ನೂ ಮೀರಿ ಆಗಾಗ ಮನಸ್ಸಿಗೆ – ‘ನಾನು ಮಾಡ್ತಿರೋದು ಸರಿಯಾ?’ ಅನ್ನುವ ಪ್ರಶ್ನೆ ಕಾಡುತ್ತೆ. ಪರಿವಾರಕ್ಕೆ ಸಮಯ ಕೊಡದೆ, ಮನೆಕೆಲಸ ಸರಿ ಮಾಡಿದ್ರೂ ಕೂಡ ಸಮಾಧಾನ ಇಲ್ಲದೇ ಅದೊಂದೇ ಪ್ರಶ್ನೆ ಮನಸಿನಲ್ಲಿ ಸದಾ ಕೊರೆಯುತ್ತೆ. ಆದರೆ ರಂಗಭೂಮಿಯಲ್ಲಿ ಅದೇನೋ ವಿಚಿತ್ರವಾದ ಶಕ್ತಿ ಇದೆ. ಆ ಪ್ರಶ್ನೆಗೆ ಉತ್ತರಿಸುವ ತಾಕತ್ತು ಕೂಡ ಆ ಶಕ್ತಿಗಿದೆ ಎಂಬುದು ನನಗೆ ಮನದಟ್ಟಾಗಿದೆ. ಅದು ನಮ್ಮಲ್ಲಿನ ಧೈರ್ಯ, ಸ್ಥಿರತೆ, ಸಹನಾಶಕ್ತಿ ಇಮ್ಮಡಿಸಿ ನಮ್ಮನ್ನು ಮನದ ಆಳದಿಂದಲೇ ಗಟ್ಟಿ ಮಾಡುತ್ತದೆ. ಸಾಮಾನ್ಯವಾಗಿ ಯಾವುದೇ ಕಲೆಗೆ ಅದರದೇ ಆದ ವಿಶೇಷ ಗೌರವವಿರುತ್ತದೆ. ನಾಟಕದಲ್ಲಿ ಬರೀ ನಟನೆ ಅಲ್ಲದೆ, ಹಲವು ಬಗೆಯ ಕಲೆಗಳನ್ನು ಕಲಿಯಲು ಅವಕಾಶವಿರುತ್ತದೆ. ಓದು, ಬರಹ, ವೇಷಭೂಷಣ, ಬೆಳಕು, ನೃತ್ಯ, ಸಂಗೀತ, ಧ್ವನಿ, ಉಚ್ಛಾರಣೆ, ಹಾವಭಾವ ಇತ್ಯಾದಿಗಳು ಒಂದು ನಾಟಕ ಕಟ್ಟುವಾಗ ಬರುವಂತಹ ಸಹಜಕಲೆಗಳು. ಜೀವನದ ಬಂಡಿಯ ಸರಾಗವಾಗಿ ಸಾಗಿಸಲು ರಂಗಭೂಮಿ ಸಹಾಯ ಮಾಡುತ್ತದೆ ಎಂದರೆ ಅತಿಶಯೋಕ್ತಿಯಾಗದು. ಲಿಂಗತಾರತಮ್ಯವನ್ನು ಲೆಕ್ಕಿಸದೇ ನಮ್ಮಲ್ಲಿರುವ ಕಲೆಯ ಆಸ್ಥೆಯನ್ನು ಮುಂದುವರಿಸೋಣ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s